Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ದಾವೀದನು ಸೌಲನ ಸಂಗಡ ಮಾತನಾಡಿ ಮುಗಿಸಿದ ಮೇಲೆ, ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
2. ಇದಲ್ಲದೆ ಸೌಲನು ಆ ದಿವಸ ಅವನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು. ತಿರುಗಿ ಅವನ ತಂದೆಯ ಮನೆಗೆ ಹೋಗಗೊಡಿಸಲಿಲ್ಲ.
3. ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದನನ್ನು ಪ್ರೀತಿಮಾಡಿದ್ದರಿಂದ, ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು.
4. ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ, ತನ್ನ ವಸ್ತ್ರಗಳನ್ನೂ, ಖಡ್ಗವನ್ನೂ, ಬಿಲ್ಲನ್ನೂ, ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.
5. ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ, ಅಲ್ಲಿಗೆ ಹೋಗಿ ಅವನು ಎಲ್ಲವನ್ನು ವಿವೇಕದಿಂದ ಬಹು ಯಶಸ್ವಿಯಾಗಿ ಮಾಡುತ್ತಿದ್ದನು. ಆದ್ದರಿಂದ ಸೌಲನು ಅವನನ್ನು ಸೈನ್ಯದ ಮೇಲೆ ಅಧಿಕಾರಿಯಾಗಿ ನೇಮಿಸಿದನು. ಇದು ಸಮಸ್ತ ಜನರಿಗೂ, ಸೌಲನ ಸಮಸ್ತ ಸೇವಕರಿಗೂ ಮೆಚ್ಚಿಕೆಯಾಗಿತ್ತು.
6. ದಾವೀದನು ಫಿಲಿಷ್ಟಿಯರನ್ನು ಹೊಡೆದು ಜನರಸಹಿತವಾಗಿ ಬರುವಾಗ, ಇಸ್ರಾಯೇಲರ ಸಮಸ್ತ ಪಟ್ಟಣಗಳಿಂದ ಸ್ತ್ರೀಯರು ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಸಂತೋಷದಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.
7. ಆ ಸ್ತ್ರೀಯರು ಒಬ್ಬರಿಗೊಬ್ಬರು, “ಸೌಲನು ಸಾವಿರಗಳಷ್ಟು ಕೊಂದನು, ದಾವೀದನು ಹತ್ತು ಸಾವಿರಗಳಷ್ಟು ಕೊಂದನು,” ಎಂದು ಹಾಡಿದರು.
8. ಇದರಿಂದ ಸೌಲನಿಗೆ ಬಹು ಕೋಪವಾಯಿತು. ಆ ಹಾಡಿನಿಂದ ಅವನಿಗೆ ಬಹುಬೇಸರವಾಯಿತು. “ಇವರು ದಾವೀದನಿಗೆ ಹತ್ತು ಸಾವಿರಗಳಷ್ಟು ಎಂದು ಹಾಡಿದ್ದಾರೆ; ನನಗೆ ಸಾವಿರಗಳಷ್ಟೇ ಎಂದು ಹಾಡಿದ್ದಾರೆ; ಹಾಗಾದರೆ, ಅವನಿಗೆ ರಾಜ್ಯವಲ್ಲದೆ ಇನ್ನು ಆಗಬೇಕಾದದ್ದೇನು?” ಎಂದುಕೊಂಡನು.
9. ಆ ದಿವಸ ಮೊದಲುಗೊಂಡು ಸೌಲನು ದಾವೀದನ ಮೇಲೆ ಮತ್ಸರದ ಕಣ್ಣಿಟ್ಟನು.
10. ಮಾರನೆಯ ದಿವಸದಲ್ಲಿ ದೇವರಿಂದ ಅನುಮತಿಸಿದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಬುದ್ಧಿಗೆಟ್ಟು ಮನೆಯಲ್ಲಿ ಕೂಗಾಡತೊಡಗಿದನು. ಆಗ ದಾವೀದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಕಿನ್ನರಿಯನ್ನು ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
11. ಆಗ ಸೌಲನು, “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯುವೆನು,” ಎಂದು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ಅವನ ಸಮ್ಮುಖದಿಂದ ತಪ್ಪಿಸಿಕೊಂಡನು.
12. ಸೌಲನು ದಾವೀದನಿಗೆ ಭಯಪಟ್ಟನು. ಏಕೆಂದರೆ ಯೆಹೋವ ದೇವರು ಅವನ ಸಂಗಡ ಇದ್ದರು. ಸೌಲನ ಕಡೆಯಿಂದ ಹೊರಟು ಹೋಗಿದ್ದರು.
13. ಆದ್ದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು, ಸಾವಿರ ಜನರಿಗೆ ಪ್ರಧಾನನ್ನಾಗಿ ಮಾಡಿದನು. ಹಾಗೆಯೇ ಅವನು ದಳಪತಿಯಾಗಿ ಸೈನಿಕರನ್ನು ಕರೆದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
14. ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ತನ್ನ ಸಕಲ ಮಾರ್ಗಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.
15. ಅವನು ಜಯಶಾಲಿಯಾಗುತ್ತಿದ್ದದ್ದನ್ನು ಸೌಲನು ಕಂಡು ಅವನಿಗೆ ಭಯಪಟ್ಟಿದ್ದನು.
16. ಆದರೆ ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇರುವುದರಿಂದ ಅವನನ್ನು ಪ್ರೀತಿ ಮಾಡಿದರು.
17. ಆಗ ಸೌಲನು, “ನಾನು ಅವನ ಮೇಲೆ ವಿರೋಧವಾಗಿ ಕೈಯೆತ್ತಬಾರದು. ಫಿಲಿಷ್ಟಿಯರು ಅದನ್ನು ಮಾಡಲಿ,” ಎಂದು ತನ್ನಷ್ಟಕ್ಕೆ ಅಂದುಕೊಂಡು ದಾವೀದನಿಗೆ, “ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು, ನೀನು ನನಗೋಸ್ಕರ ಪರಾಕ್ರಮಶಾಲಿಯಾಗಿದ್ದು ಯೆಹೋವ ದೇವರ ಯುದ್ಧಗಳನ್ನು ನಡೆಸು,” ಎಂದನು.
18. ದಾವೀದನು ಸೌಲನಿಗೆ, “ಅರಸನಿಗೆ ಅಳಿಯನಾಗಿರುವುದಕ್ಕೆ ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರವು?” ಎಂದನು.
19. ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಮದುವೆಮಾಡಿಕೊಡುವ ಸಮಯ ಬಂದಾಗ, ಅವಳನ್ನು ಮೆಹೋಲದವನಾದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.
20. ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಅದು ಸೌಲನಿಗೆ ತಿಳಿದುಬಂದಾಗ, ಆ ಕಾರ್ಯವು ಅವನಿಗೆ ಮೆಚ್ಚಿಕೆಯಾಯಿತು.
21. “ಅವನಿಗೆ ಉರುಲಾಗಿರುವ ಹಾಗೆಯೂ, ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು,” ಎಂದುಕೊಂಡನು. ಆದ್ದರಿಂದ ಸೌಲನು ದಾವೀದನಿಗೆ, “ನೀನು ನನ್ನ ಅಳಿಯನಾಗಲು ಎರಡನೆಯ ಅವಕಾಶ,” ಎಂದನು.
22. ಸೌಲನು ತನ್ನ ಸೇವಕರಿಗೆ, “ನೀವು ದಾವೀದನ ಸಂಗಡ ಅಂತರಂಗವಾಗಿ ಮಾತನಾಡಿ, ಇಗೋ, ಅರಸನು ನಿನ್ನ ಮೇಲೆ ಪ್ರೀತಿಯುಳ್ಳವನಾಗಿದ್ದಾನೆ; ಈಗ ನೀನು ಅರಸನಿಗೆ ಅಳಿಯನಾಗೆಂದು, ಹೇಳಿರಿ,” ಎಂದು ಆಜ್ಞಾಪಿಸಿದನು.
23. ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು, “ನಾನು ದರಿದ್ರನೂ ಅಲ್ಪನೂ ಆಗಿರುವಾಗ, ನಾನು ಅರಸನಿಗೆ ಅಳಿಯನಾಗುವುದು ಅಷ್ಟು ಸಾಧಾರಣ ಸಂಗತಿಯೆಂದು ನೆನಸುತ್ತೀರೋ?” ಎಂದನು.
24. ಆಗ ಸೌಲನ ಸೇವಕರು ಸೌಲನಿಗೆ, ದಾವೀದನು ಈ ಪ್ರಕಾರವಾಗಿ ಮಾತನಾಡಿದನೆಂದು ಹೇಳಿದರು.
25. ಆದರೆ ಸೌಲನು ದಾವೀದನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ, “ನೀವು ದಾವೀದನಿಗೆ ಅರಸನು ಯಾವ ತೆರವನ್ನು ಅಪೇಕ್ಷಿಸದೆ, ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸುತ್ತಾನೆಂದು ಹೇಳಿರಿ,” ಎಂದನು.
26. ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ, ಅರಸನಿಗೆ ಅಳಿಯನಾಗುವುದು ಅವನಿಗೆ ಚೆನ್ನಾಗಿ ಕಾಣಿಸಿತು.
27. ಆದ್ದರಿಂದ ನೇಮಿಸಿದ ದಿವಸಗಳು ಈಡೇರುವುದಕ್ಕಿಂತ ಮುಂಚೆ ದಾವೀದನು ಎದ್ದು, ತನ್ನ ಜನರನ್ನು ಕರಕೊಂಡು ಹೋಗಿ, ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಹೊಡೆದು, ಅವರ ಮುಂದೊಗಲುಗಳನ್ನು ತಂದು, ತಾನು ಅರಸನಿಗೆ ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಪುತ್ರಿಯಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
28. ಸೌಲನು, ಯೆಹೋವ ದೇವರು ದಾವೀದನ ಸಂಗಡ ಇದ್ದಾರೆಂದೂ, ತನ್ನ ಮಗಳಾದ ಮೀಕಲಳು ಅವನನ್ನು ಪ್ರೀತಿ ಮಾಡಿದ್ದಳೆಂದು ತಿಳಿದುಕೊಂಡನು.
29. ಸೌಲನು ದಾವೀದನಿಗೋಸ್ಕರ ಇನ್ನೂ ಹೆಚ್ಚಾಗಿ ಭಯಪಟ್ಟನು. ಸೌಲನು ದಾವೀದನಿಗೆ ಜೀವಮಾನವೆಲ್ಲಾ ಶತ್ರುವಾಗಿದ್ದನು.
30. ಫಿಲಿಷ್ಟಿಯರ ಪ್ರಧಾನರು ಯುದ್ಧಕ್ಕೆ ಬರುತ್ತಿದ್ದರು. ಅವರು ಹೊರಟು ಬಂದಾಗಲೆಲ್ಲಾ ದಾವೀದನು ಸೌಲನ ಸಮಸ್ತ ಸೇನಾಪತಿಗಳಿಗಿಂತ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಆದ್ದರಿಂದ ಅವನ ಹೆಸರು ಬಹು ಪ್ರಸಿದ್ಧವಾಯಿತು.