Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ದೇವರು ನೋಹನನ್ನೂ, ಅವನ ಪುತ್ರರನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿ, ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
2. ಭೂಮಿಯ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಸಮುದ್ರದ ಎಲ್ಲಾ ಮೀನುಗಳ ಮೇಲೆಯೂ ನಿಮ್ಮ ಭಯ ಬೆದರಿಕೆಯು ಇರುವುದು. ನಿಮ್ಮ ಕೈಗೆ ಅವು ಕೊಡಲಾಗಿವೆ.
3. ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ. ಹಸಿರು ಪಲ್ಯಗಳ ಹಾಗೆಯೇ, ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
4. “ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು.
5. ನಿಮ್ಮ ರಕ್ತ ಸುರಿಸಿ, ಪ್ರಾಣ ತೆಗೆಯುವವರಿಗೆ, ಮುಯ್ಯಿತೀರಿಸುವೆನು, ಮೃಗವಾಗಿದ್ದರೆ ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಇನ್ನೊಬ್ಬ ಮನುಷ್ಯನಾದುದರಿಂದ ಹತಿಸಿದವನಿಗೂ ಮುಯ್ಯಿತೀರಿಸುವೆನು.
6. “ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, ಅವರ ರಕ್ತವನ್ನು ಮನುಷ್ಯರೇ ಸುರಿಸುವರು. ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದರು.
7. ಆದ್ದರಿಂದ ನೀವು ಬಹುಸಂತಾನವಾಗಿ ಹೆಚ್ಚಿರಿ. ಸಂಖ್ಯೆಯಲ್ಲಿಯೂ ಅಧಿಕವಾಗಿ ಭೂಮಿಯಲ್ಲಿ ಹೆಚ್ಚಿರಿ,” ಎಂದು ಹೇಳಿದರು.
8. ಇದಲ್ಲದೆ ದೇವರು ನೋಹನಿಗೂ ಅವನ ಸಂಗಡ ಇದ್ದ ಅವನ ಪುತ್ರರಿಗೂ ಹೇಳಿದ್ದೇನೆಂದರೆ,
9. “ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ
10. ನಿಮ್ಮ ಜೊತೆ ನಾವೆಯೊಳಗಿಂದ ಹೊರಗೆ ಬಂದ ಎಲ್ಲಾ ಜೀವಿಗಳ ಸಹಿತ ಅಂದರೆ ಪಕ್ಷಿಗಳು, ಪಶುಗಳು, ಕಾಡುಮೃಗಗಳು ಮತ್ತು ಭೂಮಿಯ ಎಲ್ಲಾ ಜೀವಿಗಳೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ
11. ಜಲಪ್ರಳಯದಿಂದ ಇನ್ನು ಮೇಲೆ ಎಲ್ಲಾ ಜೀವಿಗಳು ನಾಶವಾಗುವುದಿಲ್ಲ. ಭೂಮಿಯನ್ನು ಹಾಳು ಮಾಡುವುದಕ್ಕೆ ಇನ್ನು ಮುಂದೆ ಇಂಥ ಪ್ರಳಯವು ಇರುವುದಿಲ್ಲ ಎಂದು ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.”
12. ದೇವರು ಮತ್ತೆ ಹೇಳಿದ್ದೇನೆಂದರೆ, “ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳವರೆಗೆ ನಾನು ಮಾಡುವ ಒಡಂಬಡಿಕೆಗೆ ಗುರುತು ಇದೆ:
13. ನನ್ನ ಮಳೆಬಿಲ್ಲನ್ನು ಮೇಘಗಳಲ್ಲಿ ಇಟ್ಟಿದ್ದೇನೆ, ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವುದು.
14. ನಾನು ಭೂಮಿಯ ಮೇಲೆ ಮೇಘಗಳನ್ನು ಬರಮಾಡುವಾಗ, ಆ ಮಳೆಬಿಲ್ಲು ಮೇಘಗಳಲ್ಲಿ ಕಂಡುಬರುವುದು.
15. ಆಗ ನಾನು ನನಗೂ ನಿಮಗೂ ಪ್ರತಿಯೊಂದು ಜೀವಿಗಳಿಗೂ ಮಧ್ಯೆಯಿರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಎಲ್ಲಾ ಜೀವಿಗಳನ್ನು ನಾಶಮಾಡುವ ಪ್ರಳಯವಾಗುವುದೇ ಇಲ್ಲ.
16. ಆ ಮಳೆಬಿಲ್ಲು ಮೇಘಗಳಲ್ಲಿರುವಾಗ, ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ಇರುವ ನಿತ್ಯವಾದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವ ಹಾಗೆ, ನಾನು ಅದನ್ನು ನೋಡುವೆನು.”
17. ನಂತರ ದೇವರು ನೋಹನಿಗೆ, “ಈ ಮಳೆಬಿಲ್ಲು ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಮಧ್ಯದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತಾಗಿದೆ,” ಎಂದು ಹೇಳಿದರು.
18. ನಾವೆಯೊಳಗಿಂದ ಹೊರಬಂದ ನೋಹನ ಪುತ್ರರು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು.
19. ಈ ಮೂವರು ನೋಹನ ಮಕ್ಕಳು; ಭೂಮಿಯ ಮೇಲೆ ಚೆದರಿದ ಎಲ್ಲ ಜನರು ಇವರಿಂದಲೇ ಉತ್ಪತ್ತಿಯಾದರು.
20. ನೋಹನು ವ್ಯವಸಾಯಗಾರನಾಗಿದ್ದನು. ಅವನು ಒಂದು ದ್ರಾಕ್ಷಿತೋಟವನ್ನು ಪ್ರಾರಂಭಿಸಿದನು.
21. ಅವನು ಅದರಿಂದ ಸ್ವಲ್ಪ ದ್ರಾಕ್ಷಾರಸವನ್ನು ಕುಡಿದು ಅಮಲೇರಿ, ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿದ್ದನು.
22. ಕಾನಾನನ ತಂದೆ ಹಾಮನು, ತನ್ನ ತಂದೆಯ ಬೆತ್ತಲೆತನವನ್ನು ನೋಡಿ, ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿದನು.
23. ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತೆಗೆದುಕೊಂಡು, ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು, ಹಿಂಭಾಗವಾಗಿ ಹೋಗಿ, ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಮ್ಮುಖವಾಗಿದ್ದುದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.
24. ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು, ತನ್ನ ಕಿರಿಯ ಮಗನು ತನಗೆ ಮಾಡಿದ್ದನ್ನು ತಿಳಿದನು.
25. ನಂತರ ಅವನು ಹೀಗೆಂದನು, “ಕಾನಾನನು ಶಾಪಗ್ರಸ್ತನಾಗಲಿ, ಅವನು ತನ್ನ ಸಹೋದರರಿಗೆ ದಾಸಾನುದಾಸನಾಗಿರಲಿ.”
26. ನೋಹನು ಮತ್ತೆ ಹೇಳಿದ್ದು, “ಶೇಮನ ದೇವರಾದ ಯೆಹೋವ ಸ್ತುತಿಹೊಂದಲಿ. ಕಾನಾನನು ಶೇಮನಿಗೆ ದಾಸನಾಗಿರಲಿ.
27. ಯೆಫೆತನ ಮೇರೆಗಳನ್ನು ದೇವರು ವಿಸ್ತರಿಸಲಿ. ಯೆಫೆತನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ, ಕಾನಾನನು ಯೆಫೆತನಿಗೆ ದಾಸನಾಗಿರಲಿ.”
28. ಪ್ರಳಯವಾದ ಮೇಲೆ ನೋಹನು ಮುನ್ನೂರ ಐವತ್ತು ವರ್ಷ ಬದುಕಿದನು.
29. ನೋಹ ಒಟ್ಟು ಒಂಬೈನೂರ ಐವತ್ತು ವರ್ಷ ಜೀವಿಸಿ, ಸತ್ತನು.