Read Bible

Free to use • No login or registration required • For all ages

Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.

Genesis 40

1. ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು.

2. ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು,

3. ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು.

4. ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.

5. ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು.

6. ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು.

7. ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು.

8. ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.

9. ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು.

10. ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು.

11. ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು.

12. ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.

13. ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ.

14. ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು.

15. ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು.

16. ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.

17. ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು.

18. ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು.

19. ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.

20. ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು.

21. ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು.

22. ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು.

23. ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.