Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ, ರಾಹೇಲಳಿಗೂ, ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ, ಅವರನ್ನು ಬೇರೆ ಬೇರೆ ಮಾಡಿದನು.
2. ದಾಸಿಯರನ್ನೂ, ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ; ಅವರ ಹಿಂದೆ ಲೇಯಳನ್ನೂ, ಆಕೆಯ ಮಕ್ಕಳನ್ನೂ; ಕಟ್ಟಕಡೆಯಲ್ಲಿ ರಾಹೇಲಳನ್ನೂ, ಯೋಸೇಫನನ್ನೂ ಇರಿಸಿದನು.
3. ತಾನೇ ಅವರ ಮುಂದಾಗಿ ಹೋಗಿ ತನ್ನ ಸಹೋದರನ ಬಳಿಗೆ ಬರುವವರೆಗೆ ಏಳು ಸಾರಿ ನೆಲದವರೆಗೆ ಬಗ್ಗಿದನು.
4. ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು, ಅವನನ್ನು ಅಪ್ಪಿಕೊಂಡು, ಅವನ ಕೊರಳಿನ ಮೇಲೆ ಬಿದ್ದು, ಅವನಿಗೆ ಮುದ್ದಿಟ್ಟನು. ಅವರಿಬ್ಬರೂ ಅತ್ತರು.
5. ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು.
6. ಆಗ ದಾಸಿಯರೂ, ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.
7. ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ, ರಾಹೇಲಳೂ ಬಂದು ಅಡ್ಡಬಿದ್ದರು.
8. ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು.
9. ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು.
10. ಆಗ ಯಾಕೋಬನು, “ಹಾಗಲ್ಲ, ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದಿದ್ದೆನಾದರೆ, ನನ್ನ ಕಾಣಿಕೆಯನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ನಾನು ದೇವರ ಮುಖವನ್ನು ಕಂಡಂತೆ, ನಿನ್ನ ಮುಖವನ್ನು ಕಂಡದ್ದಕ್ಕಾಗಿಯೂ, ನೀನು ನನ್ನನ್ನು ಮೆಚ್ಚಿದ್ದಕ್ಕಾಗಿಯೂ,
11. ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು.
12. ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ನಿನ್ನ ಮುಂದೆ ಹೋಗುವೆನು,” ಎಂದನು.
13. ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು.
14. ಆದ್ದರಿಂದ ನನ್ನ ಒಡೆಯನೇ, ನೀನು ನಿನ್ನ ಸೇವಕನಿಗಿಂತಲೂ ಮುಂಚೆ ಹೋಗಬಹುದು. ನಾನು ನನ್ನ ಒಡೆಯನ ಬಳಿಗೆ ಸೇಯೀರಿಗೆ ಬರುವವರೆಗೆ, ನನ್ನ ಮುಂದಿರುವ ಮಂದೆಗಳ ನಡಿಗೆಗೂ, ಮಕ್ಕಳ ನಡಿಗೆಗೂ ತಕ್ಕ ಹಾಗೆ ಮೆಲ್ಲಗೆ ನಡೆದು ಬರುವೆನು,” ಎಂದನು.
15. ಅದಕ್ಕೆ ಏಸಾವನು, “ನನ್ನ ಬಳಿಯಲ್ಲಿರುವ ಜನರಲ್ಲಿ ಕೆಲವರನ್ನು ನಿನ್ನ ಬಳಿಯಲ್ಲಿ ಬಿಟ್ಟು ಹೋಗುತ್ತೇನೆ,” ಅನ್ನಲು. ಯಾಕೋಬನು, “ಅದರ ಅಗತ್ಯವೇನು? ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ,” ಎಂದನು.
16. ಹೀಗೆ ಏಸಾವನು ಆ ದಿನವೇ ತನ್ನ ಮಾರ್ಗವಾಗಿ ಸೇಯೀರಿಗೆ ಹಿಂದಿರುಗಿ ಹೋದನು.
17. ಯಾಕೋಬನು ಪ್ರಯಾಣಮಾಡಿ, ಸುಕ್ಕೋತಿಗೆ ಹೋಗಿ, ಮನೆಯನ್ನು ಕಟ್ಟಿಸಿಕೊಂಡನು. ಇದಲ್ಲದೆ ತನ್ನ ಪಶುಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದ್ದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.
18. ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸೇರಿ, ಅದರ ಮುಂದೆ ತನ್ನ ಗುಡಾರಗಳನ್ನು ಹಾಕಿದನು.
19. ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡುಕೊಂಡನು.
20. ಅಲ್ಲಿ ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.