Read Bible
Free to use • No login or registration required • For all ages
Choose your language, version, book, and chapter below. You can optionally pick a single verse for a focused view. Then click Go to see the passage. Need help? See our How to use guide.
1. ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.
2. ಆಗ ಸ್ತ್ರೀಯು ಸರ್ಪಕ್ಕೆ, “ತೋಟದ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು.
3. ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸತ್ತು ಹೋಗುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದಳು.
4. ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ.
5. ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.
6. ಆಗ ಸ್ತ್ರೀಯು, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು.
7. ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು.
8. ತರುವಾಯ ಯೆಹೋವ ದೇವರು, ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ, ಆ ಸ್ತ್ರೀ ಪುರುಷರು ಅವರ ಸಪ್ಪಳವನ್ನು ಕೇಳಿ, ಅವರಿಗೆ ಕಾಣಿಸಿಕೊಳ್ಳಬಾರದೆಂದು ತೋಟದ ಮರಗಳ ಮಧ್ಯದಲ್ಲಿ ಅಡಗಿಕೊಂಡರು.
9. ಆಗ ಯೆಹೋವ ದೇವರು ಮನುಷ್ಯನನ್ನು ಕರೆದು ಅವನಿಗೆ, “ನೀನು ಎಲ್ಲಿದ್ದೀ?” ಎಂದರು.
10. ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು.
11. ಅದಕ್ಕೆ ದೇವರು, “ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದೀಯೋ?” ಎಂದು ಕೇಳಿದರು.
12. ಅದಕ್ಕೆ ಮನುಷ್ಯನು, “ನೀನು ನನ್ನ ಸಂಗಡ ಇರಿಸಿದ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು. ನಾನು ತಿಂದೆನು,” ಎಂದು ಹೇಳಿದನು.
13. ಯೆಹೋವ ದೇವರು ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಅದಕ್ಕೆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು. ನಾನು ತಿಂದೆನು,” ಎಂದು ಉತ್ತರಕೊಟ್ಟಳು.
14. ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ, “ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ. ಇಂದಿನಿಂದ ನಿನ್ನ ಜೀವನ ಪೂರ್ತಿ ಹೊಟ್ಟೆಯಿಂದ ಹರಿದಾಡಿ, ಮಣ್ಣನ್ನು ತಿನ್ನುವೆ.
15. ನಾನು ನಿನಗೂ ಸ್ತ್ರೀಗೂ ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ ವೈರತ್ವವನ್ನು ಇಡುವೆನು. ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.”
16. ಬಳಿಕ ದೇವರು ಸ್ತ್ರೀಗೆ ಹೀಗೆ ಹೇಳಿದರು, “ನಾನು ನಿನ್ನ ಗರ್ಭ ವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. ನೀನು ನೋವಿನಿಂದ ಮಕ್ಕಳನ್ನು ಹೆರುವಿ. ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು. ಅವನು ನಿನ್ನನ್ನು ಆಳುವನು.”
17. ಅನಂತರ ದೇವರು ಆದಾಮನಿಗೆ ಹೀಗೆ ಹೇಳಿದರು, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು, ಅದರ ಹುಟ್ಟುವಳಿಯನ್ನು ಉಣ್ಣುವೆ.
18. ಭೂಮಿಯಲ್ಲಿ ಮುಳ್ಳುಗಿಡಗಳೂ ಕಳ್ಳಿಗಳೂ ಬೆಳೆಯುವುವು. ನೀನು ಹೊಲದ ಬೆಳೆಯನ್ನು ಉಣ್ಣುವೆ.
19. ನೀನು ಪುನಃ ಮಣ್ಣಿಗೆ ಸೇರುವ ತನಕ, ಬೆವರಿಡುತ್ತಾ ಆಹಾರವನ್ನು ಉಣ್ಣುವೆ. ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. ನೀನು ಪುನಃ ಮಣ್ಣಿಗೆ ಸೇರತಕ್ಕವನು.”
20. ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಏಕೆಂದರೆ ಆಕೆಯೇ ಬದುಕಿದವರಿಗೆಲ್ಲಾ ತಾಯಿಯಾಗಿದ್ದಾಳೆ.
21. ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು.
22. ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.
23. ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು.
24. ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.